ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿವೃತ್ತ ನೌಕರರ ತಲೆನೋವು ಇಳಿಸುವ ಪ್ರಯತ್ನವಾಗಿ ಇಪಿಎಫ್‌ಒ ಕೆಲ ಕ್ರಮಗಳನ್ನು ಕೈಗೊಂಡಿದೆ. ಪಿಂಚಣಿದಾರರು ಈಗ ಜೀವನ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸುವ ಅವಕಾಶ ಮಾಡಿಕೊಡಲಾಗಿದೆ. 80 ವರ್ಷ ಮೇಲ್ಪಟ್ಟ ವಯಸ್ಸಿನ ಪಿಂಚಣಿದಾರರಿಗೆ ಡಿಜಿಟಲ್ ಸರ್ಟಿಫಿಕೇಟ್ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಧಿ ನೀಡಲಾಗಿದೆ.
ನೀವು ನಿವೃತ್ತರಾಗಿ ಪಿಂಚಣಿ ಬರಲು ಆರಂಭವಾಗಿ 2021 ಡಿಸೆಂಬರ್ ತಿಂಗಳಿಗೆ ಇನ್ನೂ ಒಂದು ವರ್ಷ ಆಗಿಲ್ಲದಿದ್ದರೆ ಅಂಥವರು ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ಅಗತ್ಯ ಇರುವುದಿಲ್ಲ.
ಏನಿದು ಜೀವನ್ ಪ್ರಮಾಣ ಪತ್ರ?
ಭಾರತದಲ್ಲಿ ವಿವಿಧ ಸರ್ಕಾರಗಳ ಅಂದಾಜು ಒಟ್ಟು 1 ಕೋಟಿ ಪಿಂಚಣಿದಾರರಿದ್ದಾರೆ. ಇದರ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಸುಮಾರು ೨೫ ಲಕ್ಷ ಪಿಂಚಣಿದಾರರಿದ್ದಾರೆ. ಅನೇಕ ಬಾರಿ ಪಿಂಚಣಿದಾರರು ಮೃತಪಟ್ಟಾಗಲೂ ಸರ್ಕಾರದಿಂದ ಪಿಂಚಣಿ ಹೋಗುತ್ತಲೇ ಇರುತ್ತದೆ. ಇದನ್ನು ತಪ್ಪಿಸಲು ಪ್ರತೀ ವರ್ಷವೂ ಪಿಂಚಣಿದಾರರು ತಾವು ಜೀವಂತ ಇದ್ದೇವೆಂದು ನಿರೂಪಿಸಬೇಕಾಗುತ್ತದೆ. ತಾವು ಪಿಂಚಣಿಯ ಹಣ ಪಡೆಯುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಲೈಫ್ ಸರ್ಟಿಫಿಕೇಟ್ ದಾಖಲೆಗಳನ್ನು ನೀಡಬೇಕಾಗುತ್ತದೆ.
ಈ ಜೀವನ ಪ್ರಮಾಣ ಪತ್ರ ಪಡೆಯಬೇಕೆಂದರೆ ಈ ಮುಂಚೆಯಾದರೆ ಪಿಂಚಣಿದಾರರೇ ಖುದ್ದಾಗಿ ಪೆನ್ಷನ್ ವಿತರಣಾ ಸಂಸ್ಥೆ ಅಥವಾ ಅವರು ಸೇವೆ ಸಲ್ಲಿಸಿದ ಸಂಸ್ಥೆಯ ಬಳಿ ಹೋಗಬೇಕಾಗುತ್ತದೆ. ವೃದ್ಧಾಪ್ಯದಲ್ಲಿರುವ ಪಿಂಚಣಿದಾರರಿಗೆ ಇದರಿಂದ ಕಷ್ಟವಾಗುವುದನ್ನು ತಪ್ಪಿಸಲು ಸರ್ಕಾರ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯವನ್ನು ಆರಂಭಿಸಿದೆ.
ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?
* ಮೊದಲು ಡೋರ್‌ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
* ನಿಮ್ಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳಿ.
* ನಿಮ್ಮ ಪೆನ್ಷನ್ ಅಕೌಂಟ್ ನಂಬರ್ ನಮೂದಿಸಿ ವೆರಿಫೈ ಮಾಡಿ
* ಅಲ್ಲಿ ಕೇಳುವ ಶುಲ್ಕ ಪಾವತಿಸಿ
* ನಿಮ್ಮ ಮನವಿ ಕಳುಹಿಸಿ.
ಇಷ್ಟಾದ ಬಳಿಕ ಏಜೆಂಟ್‌ನ ಹೆಸರು ಇತ್ಯಾದಿ ವಿವರ ಇರುವ ಎಸ್‌ಎಂಎಸ್ ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ಗೆ ಬರುತ್ತದೆ. ನಿಮ್ಮ ಅನುಕೂಲದ ಸಮಯಕ್ಕೆ ಆ ಏಜೆಂಟ್ ನಿಮ್ಮ ಮನೆಗೆ ಬಂದು ಡಿಜಿಟಲ್ ಸರ್ಟಿಫಿಕೇಟ್ ಪಡೆಯುತ್ತಾರೆ.
ಬಯೋಮೆಟ್ರಿಕ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಬಹುದು. ಪೆನ್ಷನ್ ಡಿಸ್ಬರ್ಸಿಂಗ್ ಸಂಸ್ಥೆಗೆ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ರವಾನಿಸಲಾಗುತ್ತದೆ.